Wednesday 16 December 2020

2020-21ನೇ ಸಾಲಿನ ಟ್ಯಾಲ್ಪ್‌ ತರಬೇತಿ

 2020-21ನೇ ಸಾಲಿನ ಟ್ಯಾಲ್ಪ್‌ ಇಂಡಕ್ಷನ್‌ -01 ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷ ಡಯಟ್‌ ನಲ್ಲಿರುವ ಕಂಪ್ಯೂಟರ್‌ ಕೊಠಡಿಗಳಲ್ಲಿ ತರಬೇತಿ ನೀಡುವಂತೆ ಇರಲಿಲ್ಲ. ಕೋವಿಡ್‌ ಕಾರಣದಿಂದ ಶಿಕ್ಷಕರನ್ನು ಒಂದೆಡೆ ಸೇರಿಸುವಂತಿರಲಿಲ್ಲ. ಇದಕ್ಕಾಗಿ ಕಾರ್ಯ ಯೋಜಿಸಿದ ಡಿ.ಎಸ್.ಇ.ಆರ್.ಟಿ 2016-17ನೇ ಸಾಲಿನಲ್ಲಿ ಕಂಪ್ಯೂಟರ್‌ ಕೊಠಡಿ ಸ್ಥಾಪಿಸಿರುವ ಕಡೆಗಳಲ್ಲಿ ತರಬೇತಿ ನಡೆಸಲು ಸೂಚಿಸಿತ್ತು. 

ಮೈಸೂರು ಜಿಲ್ಲೆಯಲ್ಲಿ ಒಟ್ಟು 43 ಶಾಲೆಗಳಲ್ಲಿ ಸದರಿ ಕಂಪ್ಯೂಟರ್‌ ಕೊಠಡಿಗಳನ್ನು ಸ್ಥಾಪಿಸಲಾಗಿತ್ತು. ಈ ಕೇಂದ್ರಗಳಲ್ಲಿ ತರಬೇತಿಯನ್ನು ನಿರ್ವಹಿಸುವುದು ಒಂದು ಸವಾಲೇ  ಆಗಿತ್ತು. ಈ ಸಂದರ್ಭದಲ್ಲಿ 36 ಕೇಂದ್ರಗಳಲ್ಲಿ ಮೊದಲಿಗೆ ತರಬೇತಿಯನ್ನು ಆಯೋಜಿಸಲು ನಿರ್ಧರಿಸಲಾಯಿತು. ಈ ಕೇಂದ್ರಗಳಿಗೆ ತರಬೇತಿ ನಿರ್ವಹಿಸಲು ಸಂಪನ್ಮೂಲ ವ್ಯಕ್ತಿಗಳನ್ನು ನಿಯೋಜಿಸುವುದು ಮತ್ತೊಂದು ಸವಲಾಗಿತ್ತು. ಈ ಸಂದರ್ಭದಲ್ಲಿ ನಮ್ಮ ಪ್ರೌಢಶಾಲಾ ಶಿಕ್ಷಕರನೇಕರನ್ನು ಸಂಪನ್ಮೂಲ ವ್ಯಕ್ತಿಗಳೆಂದು ಘೊಷಿಸಿ, ಅವರಿಗೆ ನೇರವಾಗಿ ತರಗತಿಗಳನ್ನು ಬಿಟ್ಟು ಕೊಡಲಾಯಿತು. ಬಹುತೇಕರು ಯಶಸ್ವಿಯಾದರು. ತರಬೇತಿಗಳನ್ನು ಯಶಸ್ವಿಯಾಗಿ ಪೂರೈಸಿದರು. 

  • 3 ಬ್ಯಾಚ್‌ ಗಳಲ್ಲಿ ತರಬೇತಿ ನಡೆಯಿತು
  • 36 ಕೇಂದ್ರಗಳಲ್ಲಿ ಆಯೋಜನೆ
  • 65ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು
  • 9 ಬ್ಲಾಕ್‌ ನಲ್ಲೂ ತರಬೇತಿ 

ಬ್ಯಾಚ್‌ ವಾರು ತರಬೇತಿ ವಿವರ ಇಂತಿದೆ.

SUBJECTSCBZPCMS.SHNDKANENGSANSKRITURDUP EMUSICCRAFTHorticultureDRAMATAILORINGDRAWINGTOTAL
INDUCTION Batch 119652613261645848743112293
INDUCTION Batch 27311569133211210842330255
INDUCTION Batch 3651721818127110112100
ACHIVEMENT3210141363747258223191686544648

ಇತರೆ ವಿವರ ಇಂತಿದೆ. 
 
CAT1GENMNROBCSCSTTOTALMALEFEMALETOTAL
1666101424712293159134293
105913113431725516095255
2115571691005050100
281362831210638648369279648
   
ಹೀಗೆ ಮೂರು ಬ್ಯಾಚ್‌ ಗಳಲ್ಲಿ ಒಟ್ಟು 648 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. 
ತರಬೇತಿಗೆ ಸಂಬಂಧಿಸಿದ ವಿಡಿಯೋಗಳನ್ನು ಈ ಕೆಳಕಂಡ ಲಿಂಕ್‌ ಮೂಲಕ ವೀಕ್ಷಿಸಬಹುದು. 

ಮೊದಲ ಬ್ಯಾಚ್‌ ನ ವಿಡಿಯೋ : https://youtu.be/f0S2m8uH6C0

ಎರಡನೇ ಬ್ಯಾಚ್‌ ನ ವಿಡಿಯೋ: https://youtu.be/E65H-MINZkY


ದೀಕ್ಷಾ…ಎಂಬ ದೀಕ್ಷೆ

ಸೃಜಿಸುವ ಕಾರ್ಯವೇ ಶ್ರದ್ಧೆಯ ಪ್ರತೀಕ.  ಎಷ್ಟು ಶ್ರದ್ಧೆಯೋ ಅಷ್ಟೂ ಪ್ರತಿಫಲ. ಆ ಪ್ರತಿಫಲವೂ ಸಾರ್ವಕಾಲಿಕ, ಸಾರ್ವತ್ರಿಕ, ಸಾಮೂಹಿಕ ಮನ್ನಣೆಗೆ ಅರ್ಹ. ಅಂತಹ ಸೃಜಿಸುವ ಕಾರ್ಯಗಳು ಪದೇ ಪದೇ ನಮ್ಮ ಶಿಕ್ಷಣ ಇಲಾಖೆಯಲ್ಲೂ ಸಹ ನಡೆಯುತ್ತಿರುತ್ತವೆ. ಹೊಸ ಹೊಸ ತರಬೇತಿಗೆ ಹೊಸ ಸಾಹಿತ್ಯ ರಚನೆ, ಪಠ್ಯಕ್ರಮಗಳಿಗೆ ತಕ್ಕ ಪಠ್ಯ ರಚನೆ ಹೀಗೆ.. ಒಂದಿಲ್ಲೊಂದು ಸೃಜನಶೀಲ ಕಾರ್ಯಗಳಿಗೆ ರಾಜ್ಯ ಶಿಕ್ಷಣ ಮತ್ತು ಸಂಶೋಧನೆ ಸಂಸ್ಥೆ ಸದಾ ತೆರೆದ ಬಾಗಿಲು.


ಅಂತೆಯೇ ದೀಕ್ಷಾ(DIKSHA) ಎಂಬ ವೇದಿಕೆಯಡಿಯಲ್ಲಿ ಹಲವು ಪಠ್ಯ ಸಂಪನ್ಮೂಲಗಳನ್ನು ಸೃಜಿಸುವ ಕಾರ್ಯವು ರಾಜ್ಯದ ಎಲ್ಲಾ ಡಯಟ್ ಗಳಿಗೂ ಹಂಚಿಕೆ ಮಾಡಲಾಗಿತ್ತು. ಭಾಷಾ ವಿಷಯಗಳು, ಕೋರ್ ವಿಷಯಗಳು ಸೇರಿದಂತೆ ಹಲವು ಪಾಠಗಳನ್ನು ನಮ್ಮ ಮೈಸೂರು ಡಯಟ್ ಗೂ ಸಹ ನೀಡಲಾಗಿತ್ತು.


  • ಕ್ರಿಯೋಯೋಜನೆ
  • ವಿಷಯ ಶಿಕ್ಷಕರ  ತಂಡ ರಚನೆ
  • ಪಾಠಗಳ ಹಂಚಿಕೆ
  • ಪ್ರತಿ ಘಟಕದ ಹಂಚಿಕೆ
  • ನಾವಿನ್ಯತೆಯ ಪ್ರಯೋಗ
  • ಪ್ರಾತ್ಯಕ್ಷತೆ ಕಾರ್ಯ
  • ಸೃಜನ ಸಪ್ತಾಹ(7ದಿನ ಸತತ ಕಾರ್ಯ
  • ಹೀಗೆ ಪ್ರತಿ ವಿಷಯ / ಪ್ರತಿ ಪಾಠಕ್ಕೆ ಹೊಂದಾಣಿಕೆಯಾಗುವ ಇ-ಸಂಪನ್ಮೂಲಗಳನ್ನು (ವಿಡಿಯೋ, mind map / concept map, ಪೂರಕ ಕಲಿಕಾ ಸಂಪನ್ಮೂಲಗಳು, ಗ್ರಾಫಿಕ್ಸ್ ಮತ್ತು ಚಿತ್ರಗಳು, ಪಾಠಯೋಜನೆ, ಕಲಿಕಾ ಫಲಗಳು, ಆದ್ಯತಾ ಪರಿಕಲ್ಪನೆಗಳು, ನಾವೀನ್ಯ ಬೋದನಾ ಕ್ರಮಗಳು, ಪಠ್ಯ ಸಂಪನ್ಮೂಲಗಳು…….ಇತ್ಯಾದಿ) ಸೃಜಿಸಲಾಗಿದೆ.
ಹಂತ ಹಂತವಾಗಿ ಯಶಸ್ವಿಯಾಗಿ ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ನೋಡಲ್‌ ಅಧಿಕಾರಿಗಳಾದ ಶ್ರೀಮತಿ ಭಾಗ್ಯಲಕ್ಷ್ಮೀ ರವರು. ಏಳು ವಿಷಯಗಳಲ್ಲಿ ಒಟ್ಟು 69 ಸಂಪನ್ಮೂಲ ಶಿಕ್ಷಕರಿದ್ದರು. ಇವರೆಲ್ಲರೂ ಸೇರಿ ಒಟ್ಟು 314 ಸಂಪನ್ಮೂಲಗಳನ್ನು ಸೃಜಿಸಿದರು. ಒಂದೊಂದು ವಿಭಿನ್ನ. ಒಂದೊಂದು ವಿಶಿಷ್ಟ. ಹೊಸ ಆವಿಷ್ಕಾರಗಳಿಗೆ ಈ ವೇದಿಕೆ ಸಾಕ್ಷಿಯಾಯಿತು. ಈ ಸಂಪನ್ಮೂಲ ವ್ಯಕ್ತಿಗಳೆಲ್ಲರನ್ನೂ ಒಟ್ಟುಗೂಡಿಸಿ ಅವರನ್ನು ತಿದ್ದುವ, ತೀಡುವ ಕಾರ್ಯ ನಿರ್ವಹಿಸುತ್ತಲೇ ಅವರನ್ನು ಹುರಿದುಂಬಿಸಿ ವೇದಿಕೆಯಲ್ಲಿ ಮೈಸೂರಿನ ಡಯಟ್‌ ನ ಸ್ಥಾನವನ್ನು ಗಟ್ಟಿಗೊಳಿಸಿದವರು ನೋಡಲ್‌ ಅಧಿಕಾರಿಗಳು. 

Tuesday 4 August 2020

ವಸಂತಯಾನ.


ವಸಂತಯಾನ. ಇದು ಕೋವಿಡ್ ಕಾಲದ ಸಾಪ್ತಾಹಿಕ. ನಮ್ಮ ಹೆಮ್ಮೆಯ ಶಿಕ್ಷಕ ಪ್ರತಿನಿಧಿ. ಒಂದಷ್ಟು ಓದು, ಒಂದಿಷ್ಟು ಸ್ಫೂರ್ತಿ, ಮತ್ತೊಂದಿಷ್ಟು ಹೊಸ ಹೊಸ ವಿಷಯಗಳ ಕಲಿಕೆಗೆ ಅವಕಾಶ ನೀಡುವ ಇಂಗಿತ ಇದರದ್ದು. ಅಂಬೆಗಾಲಿನ ಈ ಹೆಜ್ಜೆಗೆ ನೀವು ಗೆಜ್ಜೆಯಾಗಿ. ನಿಮ್ಮ ಸಲಹೆ ನೀಡಿ. ನವ ನವೀನ ವಿಷಗಳನ್ನು ಹಂಚಿಕೊಳ್ಳಿ. ನಾವಿನ್ಯತೆಯ ಲತೆ ಹಬ್ಬಲಿ. ಹೆಚ್ಚಲಿ ನಮ್ಮ ವಸಂತಯಾನದ ರಸಬಳ್ಳಿ.



Friday 20 March 2020

ಪ್ರಯೋಗಗಳಿಗೆ ತೆರೆದುಕೊಂಡ ಹುಣಸೂರಿನ ಧರ್ಮಾಪುರ ಪ್ರೌಢಶಾಲೆ – ಆಹಾ ವಿಜ್ಞಾನ ಸಪ್ತಾಹ !



ಪ್ರಾರ್ಥನೆ - ಶುರು : 
ಆ ದಿನ ಹೋಗಲೇ ಬೇಕಾದಅನಿವಾರ್ಯತೆ ಇತ್ತು. ಪದೇಪದೇ ನೆನಪಿಸಿದ್ದರು. ಬರದೇ ಇದ್ದರೆ ನಮ್ಮ ಮಕ್ಕಳನ್ನು ಕಾಲೇಜಿಗೆ ಕರೆತರ್ತೇನೆ ಎಂದಿದ್ದರು. ಹನ್ನೆರಡು  ವರ್ಷಗಳ ಕಾಲ ನಮ್ಮ ಸಂಸ್ಥೆಯಲ್ಲಿದ್ದವರವರು. ಅವರ ಮಾತಿನಲ್ಲಿ ಆತ್ಮೀಯತೆ ಇತ್ತು. ಇಷ್ಟು ಕರೆಸಿಕೊಳ್ಳಬಾರದೆಂದೇ ನಿರ್ಧರಿಸಿದ್ದೆ. ಆ ದಿನ ಬಂದೇ ಬಿಟ್ಟಿತ್ತು. ಜೊತೆಗೆ ಮಿತಭಾಷಿಯೋರ್ವರು ಜೊತೆಯಾದರು. ಅವರೂ ನಮ್ಮ ಸಂಸ್ಥೆಯವರೇ. ಹಿತ ಮಿತ ಮೃದವಚನಂ’ ಅವರ ವ್ಯಕ್ತಿತ್ವ. ಹಸ್ತಲಾಘವ ಮಾಡಿದರೇ ಅಷ್ಟು ಸುಕೋಮಲ ದೇಹದಿಂದ ಸತ್ಕಂಪನವಾಗುವಂತೆ ಭಾಸವಾಗುತ್ತಿತ್ತು. ಅಂತೂ ಜೊತೆಯಾದೆವು. ಅವರು ನನ್ನ ಸಂಪರ್ಕಿಸುವ ಮುನ್ನವೇ ನಾನೊಂದು ಪ್ರಾಥಮಿಕ ಶಾಲೆಯ ಪ್ರಾರ್ಥನೆ ಮುಗಿಸಿದ್ದೆ. “ ಚಿಕ್ಕಮಕ್ಕಳು ಹಾಡಬೇಡಿ.” ಎಂದು ಪದೇ ಪದೇ ಹೇಳುತ್ತಿದ್ದ ದೈಹಿಕ ಶಿಕ್ಷಕರು, ಪ್ರಾರ್ಥನೆಗೆ ನಿಂತಿದ್ದ ವೇದಿಕೆಯ ಹಿಂದೆಯೇ ಇದ್ದ ಕಟ್ಟಡದಿಂದ ಇಣುಕಿಯೂ ನೋಡದ ಶಿಕ್ಷಕರಿಯೋರ್ವರು, ಅವರ ಜೊತೆಗಿದ್ದ ಮೂರು ಮತ್ತೊಂದು ಮಕ್ಕಳು, ಅಶುದ್ಧ ಹಾಡುಗಾರಿಕೆ, ಶಿಸ್ತಾಗಿ ನಿಲ್ಲಿಸುವುದು ನಮ್ಮ ಜವಾಬ್ದಾರಿಯಲ್ಲ ಅದು ಪೀಟಿ ಮೇಷ್ಟ್ರ ಡ್ಯೂಟಿ ಎಂದುಕೊಂಡಂತಿದ್ದ ಇತರೆ ಶಿಕ್ಷಕರು ಬೆಳ್ಳಂಬೆಳಿಗ್ಗೆ ಹೊರಟಿದ್ದವನ ಮನಸಿಗೆ ಘಾಸಿಗೊಳಿಸಲಿಲ್ಲ. ಏಕೆಂದರೆ ಅದು ಹೊಸತೇನಲ್ಲ. ಬಹುತೇಕ ಹಳೇ ಅನುಭವದ ಹೊಸ ಅಧ್ಯಾಯ.


ಧರ್ಮಾ - ಪುರ ಪ್ರವೇಶ : 
ಕಾದಿರುವಳು ಶಬರಿ ರಾಮ ಬರುವನೆಂದು… ಹಾಡು ನೆನಪಿಸುವಂತೆ ಬರ ಬರುತ್ತಲೇ ಪ್ರೀತಿಯಿಂದ ಆಹ್ವಾನಿಸಿದ ಆ ಊರಿನ ಶಿಕ್ಷಕರು ಆರಂಭದಲ್ಲೇ ಪ್ರೌಢತೆ ಮೆರೆದರು. ಕಚೇರಿ ತುಂಬಿದ್ದ ಬಾಳೆಕಾಯಿ, ತರಕಾರಿ, ಟೊಮೋಟೋ, ಇವರ ಮೋಟೋ ಹೇಗಿದೆ ? ಏನಿದೆ ? ಎಂಬುದನ್ನು ಹೇಳಲೆಂಬಂತೆ ಇ್ದದವು. ಯಾರೋರ್ವರನ್ನೂ ಬಿಡದೆ ಅವರೆಲ್ಲರನ್ನೂ ಪ್ರಯೋಗ ಶಿಶು ಮಾಡಿಯಾಗಿತ್ತು. ಬಂದವರೆದುರು ಕಲಿತದ್ದನ್ನೆಲ್ಲಾ ಬಡಬಡಿಸಬೇಕೆಂದು ಅವರೂ ಅಣಿಗೊಂಡಿದ್ದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಉತ್ತರದಿಂ ದಕ್ಷಿಣ ಧ್ರುವಕೂ ಸಾಲಾಗಿ ತಮ್ಮ ಕಿರಾಣಿ ಅಂಗಡಿ ತೆರೆದಿಟ್ಟುಕೊಂಡಿದ್ದ ಮಕ್ಕಳು ಒಂದಿಲ್ಲೊಂದು ಪ್ರಯೊಗಗಳನ್ನು ಮಾಡಿಕೊಂಡು ನಿಂತಿದ್ದರು. ಅದು ರಾಷ್ಟ್ರೀಯ ವಿಜ್ಞಾನಿಗಳ ದಿನದ ಪ್ರಯುಕ್ತ ಜರುಗುತ್ತಿದ್ದ ಸಪ್ತಾಹದ ಮೂರನೇ ದಿನ. ನಮಗೂ ಪ್ರಯೋಗಾಯೋಗ. ಮೊಟ್ಟ ಮೊದಲಿಗೆ ರಾಕೆಟ್ ಉಡಾಯಿಸುವ ಯೋಗ. ಸ್ಪಿರಿಟ್ ಮೂಲಕ, ಗಾಳಿಯ ಒತ್ತಡದ ಮೂಲಕ ರಾಕೆಟ್ ಹಾರಿಸಿದಾಗಲೇ ಅವರೆಲ್ಲರ ಖುಷಿ ಜಿಗಿದಿತ್ತು. ಧರ್ಮಾಪುರದ ಬಾನಂಗಳದಲ್ಲಿನ ಖುಷಿ ಸಾಂಸ್ಕೃತಿಕ ನಗರಿಯ ಕಡೆಗೆ ನಗಾರಿ ಭಾರಿಸತೊಡಗಿತ್ತು. ಗಾಳಿ, ಒತ್ತಡ, ಶಕ್ತಿಯ ವಿವಿಧ ರೂಪ, ಆಹಾರದ ಕಲಬೆರಕೆ, ಜೀವ ಕೋಶ, ಶ್ವಾಸಕೋಶ, ಹೀಗೆ ಬಗೆ ಬಗೆಯ ಪ್ರಯೋಗಳನ್ನು ಮಕ್ಕಳು ಕಿರಿಯರು ಹಿರಿಯರೆನ್ನದೇ  ಪ್ರಸ್ತುತಪಡಿಸಿದ್ದರು. ಸಮೀಪದ ರತ್ನಪುರಿಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕರೀರ್ವರು ಈ ಕುತೂಹಲದ ಮಜಲುಗಳನ್ನು ತಮ್ಮದಾಗಿಸಿಕೊಳ್ಳಲು ಬಂದಿದ್ದರು. ತಮ್ಮ ವಿಜ್ಞಾನ ವಿಭಾಗಕ್ಕೆ ಮಕ್ಕಳನ್ನು ಸೆಳೆಯುವ ಪಣವನ್ನೂ ತೊಟ್ಟಿದ್ದರು. 

ಪ್ರ-ಯೋಗಾಯೋಗ : 
ಇಷ್ಟೂ ಮಕ್ಕಳಲ್ಲಿ ಹೆಚ್ಚಿಗೆ ಇದ್ದದ್ದು ಹೆಣ್ಣುಮಕ್ಕಳು. ಪ್ರಸಕ್ತ ವಿಜ್ಞಾನ ಸಪ್ತಾಹದ ಅಡಿಬರಹವೂ ಅವರಗೇ ಸಮರ್ಪಿತವಾಗಿತ್ತು.
ಆದರೆ ಹೆಚ್ಚಿಗೆ ಇಲ್ಲಿ ಗಮನ ಸೆಳೆದವರು ಹಿಂದಿನ ಸಾಲಿನ ಹುಡುಗರು. ಕೆ.ಎಸ್.ನರ ಹಾಡಿನ ಅಂತರಾರ್ಥದಂತೆ ಹಿಂದಿನ ಸಾಲಿನ ಹುಡುಗರು ನಾವು ಎಂದೇನೂ ಪಟ್ಟಿ ಕಟ್ಟಿಕೊಳ್ಳದೇ 9ನೇ ತರಗತಿಯ ಅಭಿಷೇಕ ಗಾಜಿನ ಬಾಟಲಿಯನ್ನು ಬೇಕಾದ ಸ್ವರೂಪಕ್ಕೆ ತಕ್ಕಂತೆ ಕತ್ತರಿಸುವುದು ಹೇಗೆಂದು ಹೇಳುವಾಗ ಮಾತಿನಲ್ಲಿ ತೊದಲಿರಲಿಲ್ಲ. 

ಶ್ವಾಸಕೋಶದ ಸಾಮರ್ಥ್ಯ ತೋರಿಸುವ ಪ್ರಯೋಗ ಮುಂದಿಟ್ಟ 10ನೇ ತರಗತಿಯ ಬಸವರಾಜನಾಗಲಿ, ಆವಿಯಾಗುವಿಕೆಯಲ್ಲಿ ಸ್ಟೌವ್ ಹತ್ತಿಸಿ ತೋರಿಸುವ ಪ್ರಾತ್ಯಕ್ಷತೆ ಮಾಡಿದ ಹುಡುಗರಾಗಲಿ, ಅಳಿದುಳಿದ ಪ್ಲಾಸ್ಟಿಕ್ ಕರಗಿಸಿ ರಸ್ತೆ ಮಾದರಿ ಮಾಡಿದ್ದ ಮಹದೇವಸ್ವಾಮಿಯಂತೂ ಕಂಡಿತ ನಮ್ಮ ಶಾಲೆಗೆ ಒಂದು ಮೆಟ್ಟಿಲ್ಲನ್ನು ಈ ಪ್ಲಾಸ್ಟಿಕ್ ಬಳಸಿ ಮಾಡುತ್ತೇನೆಂದು ನಮ್ಮ ಸಲಹೆಗೆ ಉತ್ತರ ನೀಡಿದಾಗ ನಿಜಕ್ಕೂ ಖುಷಿಯಾಯಿತು. 


ಸತತ ತಿಂಗಳಿಂದ ತಯಾರಿ ನಡೆಸಿದ್ದ ಪ್ರವೀಣ ಮೇಷ್ಟ್ರ ಶ್ರಮ ಸಾರ್ಥಕತೆ ಪಡೆದಿದ್ದುದು ಅವರ ಕೊನೆಯ ಮಾತುಗಳಲ್ಲಿ ಕಣ್ಣೀರಾಗಿತ್ತು.



ಇ-ಜ್ಞಾನ : ಇನ್ನು ಎಲ್ಲಾ ಪ್ರಯೋಗ ನೋಡಿಕೊಂಡು ಹೊರಟವರಿಗೆ ಕೊನೆಯಲ್ಲಿ ಕಂಪ್ಯೂಟರ್ ಲ್ಯಾಬ್ ಬಾಗಿಲು ತೆರೆಯಿತು. ಅಲ್ಲೊಂದು ಲೇಸರ್ ಲೈಟ್ ಶೋ. ಮಕ್ಕಳೇ ತಯಾರಿಸಿದ್ದ ಶೋ ಅದು. ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಗ್ರಾಮಸ್ಥರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಜೋರು ಚಪ್ಪಾಳೆ ತಟ್ಟಿದರು. 
ಮುಂದಿನದು ತಂತ್ರಜ್ಞಾನದ ಪ್ರಸ್ತುತಿ. “ಸರ್ ಇದು ನೀವು ತರಬೇತಿ ಹೇಳಿಕೊಟ್ಟದ್ದ ಎಚ್.5 ಪಿ ಮೂಲಕ ತಯಾರಿಸಿದ್ದು, ಕಳೆದವಾರವಷ್ಟೇ ಕೌನ್ ಬನೇಗಾ ಕರೋಡ್ ಪತಿ ಮಾದರಿ ರಸಪ್ರಶ್ನೆ ಮಾಡಿದ್ದೆವು. ಸರ್ ಇದು ನೀವು ಹೇಳಿಕೊಟ್ಟಿದ್ದ ವಿಡಿಯೋಗಳ ರಚನೆ, ಇದು ವಿಷಯವಾರು ವಿಭಾಗಗಳು, ಇದು ಶಾಲೆಯಲ್ಲಿ ನಡೆದ ಆಚರಣೆಗಳ ವಿವರಗಳು, ಸರ್ ನೀವು ಈ ದಿನ ಬಂದು ಕಾರ್ಯಕ್ರಮ ಉದ್ಘಾಟಿಸಿದ್ದ ಕ್ಷಣಗಳನ್ನು ಆದಾಗಲೇ ಬ್ಲಾಗ್ ನಲ್ಲಿ ಹಾಕಿದ್ದೇವೆ ಎಂದಾಗ ಪಿ.ಯು.ಸಿ ಉಪನ್ಯಾಸಕರಲ್ಲಿ ಅಚ್ಚರಿ. 
ನಮಗೂ ಕೂಡ. ಹೀಗೆ ಮೇಷ್ಟ್ರು ಹೇಳಿಕೊಟ್ಟ ಪಾಠಗಳನ್ನೆಲ್ಲಾ ತಪ್ಪದೇ ಒಪ್ಪಿಸುವ ಮಕ್ಕಳಂತೆ ಆ ದಿನ ಮೇಷ್ಟ್ರುಗಳು ಒಪ್ಪಿಸುತ್ತಿದ್ದುದ್ದು ನಿಜಕ್ಕೂ ಖುಷಿ ಮತ್ತು ಹೆಮ್ಮೆ ಎನಿಸಿತು.



ಗಣಿ-ತಾ ತಾ ಲೋಕ: ಹಾಗೆಯೇ ಈ ದಿನ ಗಣಿತ ಲೋಕದ ಪ್ರವೇಶವೂ ಆಯಿತು. ರೇಖಾಗಣಿತ, ಅಂಕಗಣಿತ, ಬೀಜಗಣಿತದ ಬೀಜಾಂಕುರ ಮಾಡಿಸಿದ್ದ ಶಿಕ್ಷಕಿಯವರು 8 ರಿಂದ 10ನೇ ತರಗತಿಯವರೆಗಿನ ಮಕ್ಕಳನ್ನೇ ಜೊತೆಗೂಡಿಸಿಕೊಂಡು ತಾವೂ ಗಣಿತದ ಪ್ರಾತ್ಯಕ್ಷಿತೆಗಳನ್ನು ತೆರೆದಿಟ್ಟಿದ್ದರು. ಮೋಜುಗಣಿತವಿತ್ತು, ಸಿಹಿ ಗಣಿತ ವಿತ್ತು, ಆಕಾರ ಗುರುತಿಸಿದವರ ಬಾಯಿ ಸಿಹಿಯೂ ಆಯಿತು. ಮಿತಭಾಷಿ ಅಮಿತ್ ಸರ್ ಎಲ್ಲ ಪ್ರಶ್ನೆಗೂ ಎಲ್ಲರ ಬಳಿ ಬಂದು ಸಮರ್ಥಿಸಿಕೊಳ್ಳುತ್ತಿದ್ದ ಮಗುವನ್ನು ಪ್ರಶಂಸಿದರು. ಅವಳನ್ನೇ ಪ್ರಶ್ನಿಸಿ ಹುಳು ಬಿಟ್ಟು ಕೊನೆಗೆ ಶಹಬ್ಬಾಸ್ ಹೇಳಿ ಬಂದರು. ಜೊತೆಗಿದ್ದ ಕ್ಲಸ್ಟರ್ ನ ಸ್ಟಾರ್ ಸಿ.ಆರ್.ಪಿ ವಾಸು ಪ್ರಾತ್ಯಕ್ಷಿತೆಗಳ ಬೇರೆ ಬೇರೆ ಸಾಧ್ಯತೆಗಳನ್ನು ಪ್ರಶ್ನಿಸುವ ಮೂಲಕ ಮತ್ತೆ ಅರ್ಥೈಸುವ ಮೂಲಕ ಮಕ್ಕಳ ಬುದ್ದಿಗೆ ಸಾಣೆ ಹಿಡಿದರು.



ನೆನೆ ನೆನೆ ಮನವೆ : ಬಿಸಿಯೂಟದ ಅನ್ನಪೂರ್ಣೆಯರೂ ಮಕ್ಕಳಂತೆ ತಾವೂ ಸಹ  ತರೇಹವಾರಿ ಖಾದ್ಯಗಳನ್ನು ಪ್ರಯೋಗಪಡಿಸಿದರು. ಸಂತೃಪ್ತರಾದ ಪಿಡಿಓ, ಗ್ರಾಮಸ್ಥರು, ಎಸ್.ಡಿ.ಎಂ.ಸಿ ಸದಸ್ಯರೀರ್ವರು, ವೇದಿಕೆ ಮೇಲೇರಿ ಮಕ್ಕಳೆದುರು ಮಾತನಾಡುವಾಗ ಮನದಣಿಯೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸದಾ ಸಂತೋಷದಿಂದ  ಆನಂದದಿಂದ ಇರುವ ಸಂಕೇತವೇ ಎಂಬಂತೆ ಪ್ರಾವಿಣ್ಯತೆ, ನಾವಿನ್ಯತೆ ಇಲ್ಲಿ ಮೈಗೂಡಿತ್ತು. ವಿಜ್ಞಾನ ಶಿಕ್ಷಕರಾದ ಪ್ರವೀಣ್ , ಇಂಗ್ಲೀಷ್ ಶಿಕ್ಷಕರಾದ ಸಂತೋಷ್, ಕನ್ನಡ ಶಿಕ್ಷಕರಾದ ನವೀನ್, ಗಣಿತ ಶಿಕ್ಷಕರಾದ, ಸಮಾಜ ವಿಜ್ಞಾನ ಶಿಕ್ಷಕಿಯವರಾದ, ಎಲ್ಲರಲ್ಲೂ ಎತ್ತರದಲ್ಲಿ ಸವಾಲು ಹಾಕಿದ್ದ ದೈಹಿಕ ಶಿಕ್ಷಕರಾದ ರವರು ಜೊತೆಗೆ ಕನ್ನಡ ಬೋಧನೆಗೂ ಕಾರಣಿಕರಾಗಿದ್ದ ಕರಣಿಕ ಕೃಷ್ಣಚಾರಿಯವರೆಲ್ಲರೂ ಮೇಡಂ ಕಮಲರವರನ್ನು ಹೊಗಳಿದ್ದೇ ಹೊಗಳಿದ್ದು. 
ಕಮಲರವರು ಯಾರಿಗೂ ತಿಳಿಸದೇ ಇವರಿಗೆ ಕೊಟ್ಟ ನೆನಪುಗಳು ಅವರನ್ನೆಲ್ಲಾ ವಿನೀತರನ್ನಾಗಿಸಿತ್ತು. ಒಂದು ಸತ್ಕಂಪನ ಅಲ್ಲಿ ಆಗಿತ್ತು. ಅದು ಅಲ್ಲಿ ಪ್ರಸಾದ ರೂಪದಲ್ಲಿ ಪಕ್ಕದ ಹಿರಿಯ ಪ್ರಾಥಮಮಿಕ ಶಾಲೆಗೂ ತಲುಪಿತ್ತು. ಅವರೂ ಬೆಳ್ಳಗಿನಿಂದ ಸಂಜೆಯವರೆಗೂ ಕಾದಿದ್ದರು.  ನಮ್ಮ ಜೊತೆಗಿದ್ದು ನಮ್ಮನ್ನು ತಮ್ಮ ಶಾಲೆಗೂ ಕರೆದುಕೊಂಡು ಹೋದರು. ನಾಳೆ 28 ಫೆಬ್ರವರಿ ವಿಜ್ಞಾನ ವಸ್ತು ಪ್ರದರ್ಶನ ನಮ್ಮಲ್ಲೂ ಇದೆ ಬನ್ನಿ ಸರ್ ಎಂದಾಗ. ಅವರ ಕಾಳಜಿ, ಅವರ ಶ್ರಮ ಅವರ ಆಸಕ್ತಿ, ಭಕ್ತಿಯ ದರ್ಶನ ವಾಗಿತ್ತು. ಬೆಂಬಲಿಸಿ ಬಂದ ನಮ್ಮ ಹಂಬಲ ಮತ್ತೆ ಆ ಶಾಲೆಗೆ ಒಮ್ಮೆ ಹೋಗಬೇಕೆನಿಸಿದೆ. ಮತ್ತೆ ಬರುವೆವು ಶಾಲೆಗೆ. ಹೆಮ್ಮೆಯಿಂದ ಹುಣಸೂರು ತಾಲೂಕಿನ ಧರ್ಮಾಪುರದಂತಹ ಸರ್ಕಾರಿ ಪ್ರೌಢಶಾಲೆಗಳು ಜಿಲ್ಲೆಗೆ ನೂರಾಗಲಿ. ಧರ್ಮಕ್ಕೆ ಜಯವಾಗಲಿ.




ಈ ದಿನದ ವಿಶೇಷಗಳ ಸಂಪೂರ್ಣ ವಿಡಿಯೋ ವೀಕ್ಷಿಸಲು ಈ ಯೂಟೂಬ್ ಲಿಂಕ್ ಕ್ಲಿಕ್ಕಿಸಿ https://youtu.be/kAVaro0biCg
 

ಪ್ರಶಾಂತ್.ಎಂ.ಸಿ
ಉಪನ್ಯಾಸಕರು
ಡಯಟ್, ಮೈಸೂರು, 
9019807897,