Friday 20 March 2020

ಪ್ರಯೋಗಗಳಿಗೆ ತೆರೆದುಕೊಂಡ ಹುಣಸೂರಿನ ಧರ್ಮಾಪುರ ಪ್ರೌಢಶಾಲೆ – ಆಹಾ ವಿಜ್ಞಾನ ಸಪ್ತಾಹ !



ಪ್ರಾರ್ಥನೆ - ಶುರು : 
ಆ ದಿನ ಹೋಗಲೇ ಬೇಕಾದಅನಿವಾರ್ಯತೆ ಇತ್ತು. ಪದೇಪದೇ ನೆನಪಿಸಿದ್ದರು. ಬರದೇ ಇದ್ದರೆ ನಮ್ಮ ಮಕ್ಕಳನ್ನು ಕಾಲೇಜಿಗೆ ಕರೆತರ್ತೇನೆ ಎಂದಿದ್ದರು. ಹನ್ನೆರಡು  ವರ್ಷಗಳ ಕಾಲ ನಮ್ಮ ಸಂಸ್ಥೆಯಲ್ಲಿದ್ದವರವರು. ಅವರ ಮಾತಿನಲ್ಲಿ ಆತ್ಮೀಯತೆ ಇತ್ತು. ಇಷ್ಟು ಕರೆಸಿಕೊಳ್ಳಬಾರದೆಂದೇ ನಿರ್ಧರಿಸಿದ್ದೆ. ಆ ದಿನ ಬಂದೇ ಬಿಟ್ಟಿತ್ತು. ಜೊತೆಗೆ ಮಿತಭಾಷಿಯೋರ್ವರು ಜೊತೆಯಾದರು. ಅವರೂ ನಮ್ಮ ಸಂಸ್ಥೆಯವರೇ. ಹಿತ ಮಿತ ಮೃದವಚನಂ’ ಅವರ ವ್ಯಕ್ತಿತ್ವ. ಹಸ್ತಲಾಘವ ಮಾಡಿದರೇ ಅಷ್ಟು ಸುಕೋಮಲ ದೇಹದಿಂದ ಸತ್ಕಂಪನವಾಗುವಂತೆ ಭಾಸವಾಗುತ್ತಿತ್ತು. ಅಂತೂ ಜೊತೆಯಾದೆವು. ಅವರು ನನ್ನ ಸಂಪರ್ಕಿಸುವ ಮುನ್ನವೇ ನಾನೊಂದು ಪ್ರಾಥಮಿಕ ಶಾಲೆಯ ಪ್ರಾರ್ಥನೆ ಮುಗಿಸಿದ್ದೆ. “ ಚಿಕ್ಕಮಕ್ಕಳು ಹಾಡಬೇಡಿ.” ಎಂದು ಪದೇ ಪದೇ ಹೇಳುತ್ತಿದ್ದ ದೈಹಿಕ ಶಿಕ್ಷಕರು, ಪ್ರಾರ್ಥನೆಗೆ ನಿಂತಿದ್ದ ವೇದಿಕೆಯ ಹಿಂದೆಯೇ ಇದ್ದ ಕಟ್ಟಡದಿಂದ ಇಣುಕಿಯೂ ನೋಡದ ಶಿಕ್ಷಕರಿಯೋರ್ವರು, ಅವರ ಜೊತೆಗಿದ್ದ ಮೂರು ಮತ್ತೊಂದು ಮಕ್ಕಳು, ಅಶುದ್ಧ ಹಾಡುಗಾರಿಕೆ, ಶಿಸ್ತಾಗಿ ನಿಲ್ಲಿಸುವುದು ನಮ್ಮ ಜವಾಬ್ದಾರಿಯಲ್ಲ ಅದು ಪೀಟಿ ಮೇಷ್ಟ್ರ ಡ್ಯೂಟಿ ಎಂದುಕೊಂಡಂತಿದ್ದ ಇತರೆ ಶಿಕ್ಷಕರು ಬೆಳ್ಳಂಬೆಳಿಗ್ಗೆ ಹೊರಟಿದ್ದವನ ಮನಸಿಗೆ ಘಾಸಿಗೊಳಿಸಲಿಲ್ಲ. ಏಕೆಂದರೆ ಅದು ಹೊಸತೇನಲ್ಲ. ಬಹುತೇಕ ಹಳೇ ಅನುಭವದ ಹೊಸ ಅಧ್ಯಾಯ.


ಧರ್ಮಾ - ಪುರ ಪ್ರವೇಶ : 
ಕಾದಿರುವಳು ಶಬರಿ ರಾಮ ಬರುವನೆಂದು… ಹಾಡು ನೆನಪಿಸುವಂತೆ ಬರ ಬರುತ್ತಲೇ ಪ್ರೀತಿಯಿಂದ ಆಹ್ವಾನಿಸಿದ ಆ ಊರಿನ ಶಿಕ್ಷಕರು ಆರಂಭದಲ್ಲೇ ಪ್ರೌಢತೆ ಮೆರೆದರು. ಕಚೇರಿ ತುಂಬಿದ್ದ ಬಾಳೆಕಾಯಿ, ತರಕಾರಿ, ಟೊಮೋಟೋ, ಇವರ ಮೋಟೋ ಹೇಗಿದೆ ? ಏನಿದೆ ? ಎಂಬುದನ್ನು ಹೇಳಲೆಂಬಂತೆ ಇ್ದದವು. ಯಾರೋರ್ವರನ್ನೂ ಬಿಡದೆ ಅವರೆಲ್ಲರನ್ನೂ ಪ್ರಯೋಗ ಶಿಶು ಮಾಡಿಯಾಗಿತ್ತು. ಬಂದವರೆದುರು ಕಲಿತದ್ದನ್ನೆಲ್ಲಾ ಬಡಬಡಿಸಬೇಕೆಂದು ಅವರೂ ಅಣಿಗೊಂಡಿದ್ದು ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಉತ್ತರದಿಂ ದಕ್ಷಿಣ ಧ್ರುವಕೂ ಸಾಲಾಗಿ ತಮ್ಮ ಕಿರಾಣಿ ಅಂಗಡಿ ತೆರೆದಿಟ್ಟುಕೊಂಡಿದ್ದ ಮಕ್ಕಳು ಒಂದಿಲ್ಲೊಂದು ಪ್ರಯೊಗಗಳನ್ನು ಮಾಡಿಕೊಂಡು ನಿಂತಿದ್ದರು. ಅದು ರಾಷ್ಟ್ರೀಯ ವಿಜ್ಞಾನಿಗಳ ದಿನದ ಪ್ರಯುಕ್ತ ಜರುಗುತ್ತಿದ್ದ ಸಪ್ತಾಹದ ಮೂರನೇ ದಿನ. ನಮಗೂ ಪ್ರಯೋಗಾಯೋಗ. ಮೊಟ್ಟ ಮೊದಲಿಗೆ ರಾಕೆಟ್ ಉಡಾಯಿಸುವ ಯೋಗ. ಸ್ಪಿರಿಟ್ ಮೂಲಕ, ಗಾಳಿಯ ಒತ್ತಡದ ಮೂಲಕ ರಾಕೆಟ್ ಹಾರಿಸಿದಾಗಲೇ ಅವರೆಲ್ಲರ ಖುಷಿ ಜಿಗಿದಿತ್ತು. ಧರ್ಮಾಪುರದ ಬಾನಂಗಳದಲ್ಲಿನ ಖುಷಿ ಸಾಂಸ್ಕೃತಿಕ ನಗರಿಯ ಕಡೆಗೆ ನಗಾರಿ ಭಾರಿಸತೊಡಗಿತ್ತು. ಗಾಳಿ, ಒತ್ತಡ, ಶಕ್ತಿಯ ವಿವಿಧ ರೂಪ, ಆಹಾರದ ಕಲಬೆರಕೆ, ಜೀವ ಕೋಶ, ಶ್ವಾಸಕೋಶ, ಹೀಗೆ ಬಗೆ ಬಗೆಯ ಪ್ರಯೋಗಳನ್ನು ಮಕ್ಕಳು ಕಿರಿಯರು ಹಿರಿಯರೆನ್ನದೇ  ಪ್ರಸ್ತುತಪಡಿಸಿದ್ದರು. ಸಮೀಪದ ರತ್ನಪುರಿಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕರೀರ್ವರು ಈ ಕುತೂಹಲದ ಮಜಲುಗಳನ್ನು ತಮ್ಮದಾಗಿಸಿಕೊಳ್ಳಲು ಬಂದಿದ್ದರು. ತಮ್ಮ ವಿಜ್ಞಾನ ವಿಭಾಗಕ್ಕೆ ಮಕ್ಕಳನ್ನು ಸೆಳೆಯುವ ಪಣವನ್ನೂ ತೊಟ್ಟಿದ್ದರು. 

ಪ್ರ-ಯೋಗಾಯೋಗ : 
ಇಷ್ಟೂ ಮಕ್ಕಳಲ್ಲಿ ಹೆಚ್ಚಿಗೆ ಇದ್ದದ್ದು ಹೆಣ್ಣುಮಕ್ಕಳು. ಪ್ರಸಕ್ತ ವಿಜ್ಞಾನ ಸಪ್ತಾಹದ ಅಡಿಬರಹವೂ ಅವರಗೇ ಸಮರ್ಪಿತವಾಗಿತ್ತು.
ಆದರೆ ಹೆಚ್ಚಿಗೆ ಇಲ್ಲಿ ಗಮನ ಸೆಳೆದವರು ಹಿಂದಿನ ಸಾಲಿನ ಹುಡುಗರು. ಕೆ.ಎಸ್.ನರ ಹಾಡಿನ ಅಂತರಾರ್ಥದಂತೆ ಹಿಂದಿನ ಸಾಲಿನ ಹುಡುಗರು ನಾವು ಎಂದೇನೂ ಪಟ್ಟಿ ಕಟ್ಟಿಕೊಳ್ಳದೇ 9ನೇ ತರಗತಿಯ ಅಭಿಷೇಕ ಗಾಜಿನ ಬಾಟಲಿಯನ್ನು ಬೇಕಾದ ಸ್ವರೂಪಕ್ಕೆ ತಕ್ಕಂತೆ ಕತ್ತರಿಸುವುದು ಹೇಗೆಂದು ಹೇಳುವಾಗ ಮಾತಿನಲ್ಲಿ ತೊದಲಿರಲಿಲ್ಲ. 

ಶ್ವಾಸಕೋಶದ ಸಾಮರ್ಥ್ಯ ತೋರಿಸುವ ಪ್ರಯೋಗ ಮುಂದಿಟ್ಟ 10ನೇ ತರಗತಿಯ ಬಸವರಾಜನಾಗಲಿ, ಆವಿಯಾಗುವಿಕೆಯಲ್ಲಿ ಸ್ಟೌವ್ ಹತ್ತಿಸಿ ತೋರಿಸುವ ಪ್ರಾತ್ಯಕ್ಷತೆ ಮಾಡಿದ ಹುಡುಗರಾಗಲಿ, ಅಳಿದುಳಿದ ಪ್ಲಾಸ್ಟಿಕ್ ಕರಗಿಸಿ ರಸ್ತೆ ಮಾದರಿ ಮಾಡಿದ್ದ ಮಹದೇವಸ್ವಾಮಿಯಂತೂ ಕಂಡಿತ ನಮ್ಮ ಶಾಲೆಗೆ ಒಂದು ಮೆಟ್ಟಿಲ್ಲನ್ನು ಈ ಪ್ಲಾಸ್ಟಿಕ್ ಬಳಸಿ ಮಾಡುತ್ತೇನೆಂದು ನಮ್ಮ ಸಲಹೆಗೆ ಉತ್ತರ ನೀಡಿದಾಗ ನಿಜಕ್ಕೂ ಖುಷಿಯಾಯಿತು. 


ಸತತ ತಿಂಗಳಿಂದ ತಯಾರಿ ನಡೆಸಿದ್ದ ಪ್ರವೀಣ ಮೇಷ್ಟ್ರ ಶ್ರಮ ಸಾರ್ಥಕತೆ ಪಡೆದಿದ್ದುದು ಅವರ ಕೊನೆಯ ಮಾತುಗಳಲ್ಲಿ ಕಣ್ಣೀರಾಗಿತ್ತು.



ಇ-ಜ್ಞಾನ : ಇನ್ನು ಎಲ್ಲಾ ಪ್ರಯೋಗ ನೋಡಿಕೊಂಡು ಹೊರಟವರಿಗೆ ಕೊನೆಯಲ್ಲಿ ಕಂಪ್ಯೂಟರ್ ಲ್ಯಾಬ್ ಬಾಗಿಲು ತೆರೆಯಿತು. ಅಲ್ಲೊಂದು ಲೇಸರ್ ಲೈಟ್ ಶೋ. ಮಕ್ಕಳೇ ತಯಾರಿಸಿದ್ದ ಶೋ ಅದು. ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಗ್ರಾಮಸ್ಥರು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಜೋರು ಚಪ್ಪಾಳೆ ತಟ್ಟಿದರು. 
ಮುಂದಿನದು ತಂತ್ರಜ್ಞಾನದ ಪ್ರಸ್ತುತಿ. “ಸರ್ ಇದು ನೀವು ತರಬೇತಿ ಹೇಳಿಕೊಟ್ಟದ್ದ ಎಚ್.5 ಪಿ ಮೂಲಕ ತಯಾರಿಸಿದ್ದು, ಕಳೆದವಾರವಷ್ಟೇ ಕೌನ್ ಬನೇಗಾ ಕರೋಡ್ ಪತಿ ಮಾದರಿ ರಸಪ್ರಶ್ನೆ ಮಾಡಿದ್ದೆವು. ಸರ್ ಇದು ನೀವು ಹೇಳಿಕೊಟ್ಟಿದ್ದ ವಿಡಿಯೋಗಳ ರಚನೆ, ಇದು ವಿಷಯವಾರು ವಿಭಾಗಗಳು, ಇದು ಶಾಲೆಯಲ್ಲಿ ನಡೆದ ಆಚರಣೆಗಳ ವಿವರಗಳು, ಸರ್ ನೀವು ಈ ದಿನ ಬಂದು ಕಾರ್ಯಕ್ರಮ ಉದ್ಘಾಟಿಸಿದ್ದ ಕ್ಷಣಗಳನ್ನು ಆದಾಗಲೇ ಬ್ಲಾಗ್ ನಲ್ಲಿ ಹಾಕಿದ್ದೇವೆ ಎಂದಾಗ ಪಿ.ಯು.ಸಿ ಉಪನ್ಯಾಸಕರಲ್ಲಿ ಅಚ್ಚರಿ. 
ನಮಗೂ ಕೂಡ. ಹೀಗೆ ಮೇಷ್ಟ್ರು ಹೇಳಿಕೊಟ್ಟ ಪಾಠಗಳನ್ನೆಲ್ಲಾ ತಪ್ಪದೇ ಒಪ್ಪಿಸುವ ಮಕ್ಕಳಂತೆ ಆ ದಿನ ಮೇಷ್ಟ್ರುಗಳು ಒಪ್ಪಿಸುತ್ತಿದ್ದುದ್ದು ನಿಜಕ್ಕೂ ಖುಷಿ ಮತ್ತು ಹೆಮ್ಮೆ ಎನಿಸಿತು.



ಗಣಿ-ತಾ ತಾ ಲೋಕ: ಹಾಗೆಯೇ ಈ ದಿನ ಗಣಿತ ಲೋಕದ ಪ್ರವೇಶವೂ ಆಯಿತು. ರೇಖಾಗಣಿತ, ಅಂಕಗಣಿತ, ಬೀಜಗಣಿತದ ಬೀಜಾಂಕುರ ಮಾಡಿಸಿದ್ದ ಶಿಕ್ಷಕಿಯವರು 8 ರಿಂದ 10ನೇ ತರಗತಿಯವರೆಗಿನ ಮಕ್ಕಳನ್ನೇ ಜೊತೆಗೂಡಿಸಿಕೊಂಡು ತಾವೂ ಗಣಿತದ ಪ್ರಾತ್ಯಕ್ಷಿತೆಗಳನ್ನು ತೆರೆದಿಟ್ಟಿದ್ದರು. ಮೋಜುಗಣಿತವಿತ್ತು, ಸಿಹಿ ಗಣಿತ ವಿತ್ತು, ಆಕಾರ ಗುರುತಿಸಿದವರ ಬಾಯಿ ಸಿಹಿಯೂ ಆಯಿತು. ಮಿತಭಾಷಿ ಅಮಿತ್ ಸರ್ ಎಲ್ಲ ಪ್ರಶ್ನೆಗೂ ಎಲ್ಲರ ಬಳಿ ಬಂದು ಸಮರ್ಥಿಸಿಕೊಳ್ಳುತ್ತಿದ್ದ ಮಗುವನ್ನು ಪ್ರಶಂಸಿದರು. ಅವಳನ್ನೇ ಪ್ರಶ್ನಿಸಿ ಹುಳು ಬಿಟ್ಟು ಕೊನೆಗೆ ಶಹಬ್ಬಾಸ್ ಹೇಳಿ ಬಂದರು. ಜೊತೆಗಿದ್ದ ಕ್ಲಸ್ಟರ್ ನ ಸ್ಟಾರ್ ಸಿ.ಆರ್.ಪಿ ವಾಸು ಪ್ರಾತ್ಯಕ್ಷಿತೆಗಳ ಬೇರೆ ಬೇರೆ ಸಾಧ್ಯತೆಗಳನ್ನು ಪ್ರಶ್ನಿಸುವ ಮೂಲಕ ಮತ್ತೆ ಅರ್ಥೈಸುವ ಮೂಲಕ ಮಕ್ಕಳ ಬುದ್ದಿಗೆ ಸಾಣೆ ಹಿಡಿದರು.



ನೆನೆ ನೆನೆ ಮನವೆ : ಬಿಸಿಯೂಟದ ಅನ್ನಪೂರ್ಣೆಯರೂ ಮಕ್ಕಳಂತೆ ತಾವೂ ಸಹ  ತರೇಹವಾರಿ ಖಾದ್ಯಗಳನ್ನು ಪ್ರಯೋಗಪಡಿಸಿದರು. ಸಂತೃಪ್ತರಾದ ಪಿಡಿಓ, ಗ್ರಾಮಸ್ಥರು, ಎಸ್.ಡಿ.ಎಂ.ಸಿ ಸದಸ್ಯರೀರ್ವರು, ವೇದಿಕೆ ಮೇಲೇರಿ ಮಕ್ಕಳೆದುರು ಮಾತನಾಡುವಾಗ ಮನದಣಿಯೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸದಾ ಸಂತೋಷದಿಂದ  ಆನಂದದಿಂದ ಇರುವ ಸಂಕೇತವೇ ಎಂಬಂತೆ ಪ್ರಾವಿಣ್ಯತೆ, ನಾವಿನ್ಯತೆ ಇಲ್ಲಿ ಮೈಗೂಡಿತ್ತು. ವಿಜ್ಞಾನ ಶಿಕ್ಷಕರಾದ ಪ್ರವೀಣ್ , ಇಂಗ್ಲೀಷ್ ಶಿಕ್ಷಕರಾದ ಸಂತೋಷ್, ಕನ್ನಡ ಶಿಕ್ಷಕರಾದ ನವೀನ್, ಗಣಿತ ಶಿಕ್ಷಕರಾದ, ಸಮಾಜ ವಿಜ್ಞಾನ ಶಿಕ್ಷಕಿಯವರಾದ, ಎಲ್ಲರಲ್ಲೂ ಎತ್ತರದಲ್ಲಿ ಸವಾಲು ಹಾಕಿದ್ದ ದೈಹಿಕ ಶಿಕ್ಷಕರಾದ ರವರು ಜೊತೆಗೆ ಕನ್ನಡ ಬೋಧನೆಗೂ ಕಾರಣಿಕರಾಗಿದ್ದ ಕರಣಿಕ ಕೃಷ್ಣಚಾರಿಯವರೆಲ್ಲರೂ ಮೇಡಂ ಕಮಲರವರನ್ನು ಹೊಗಳಿದ್ದೇ ಹೊಗಳಿದ್ದು. 
ಕಮಲರವರು ಯಾರಿಗೂ ತಿಳಿಸದೇ ಇವರಿಗೆ ಕೊಟ್ಟ ನೆನಪುಗಳು ಅವರನ್ನೆಲ್ಲಾ ವಿನೀತರನ್ನಾಗಿಸಿತ್ತು. ಒಂದು ಸತ್ಕಂಪನ ಅಲ್ಲಿ ಆಗಿತ್ತು. ಅದು ಅಲ್ಲಿ ಪ್ರಸಾದ ರೂಪದಲ್ಲಿ ಪಕ್ಕದ ಹಿರಿಯ ಪ್ರಾಥಮಮಿಕ ಶಾಲೆಗೂ ತಲುಪಿತ್ತು. ಅವರೂ ಬೆಳ್ಳಗಿನಿಂದ ಸಂಜೆಯವರೆಗೂ ಕಾದಿದ್ದರು.  ನಮ್ಮ ಜೊತೆಗಿದ್ದು ನಮ್ಮನ್ನು ತಮ್ಮ ಶಾಲೆಗೂ ಕರೆದುಕೊಂಡು ಹೋದರು. ನಾಳೆ 28 ಫೆಬ್ರವರಿ ವಿಜ್ಞಾನ ವಸ್ತು ಪ್ರದರ್ಶನ ನಮ್ಮಲ್ಲೂ ಇದೆ ಬನ್ನಿ ಸರ್ ಎಂದಾಗ. ಅವರ ಕಾಳಜಿ, ಅವರ ಶ್ರಮ ಅವರ ಆಸಕ್ತಿ, ಭಕ್ತಿಯ ದರ್ಶನ ವಾಗಿತ್ತು. ಬೆಂಬಲಿಸಿ ಬಂದ ನಮ್ಮ ಹಂಬಲ ಮತ್ತೆ ಆ ಶಾಲೆಗೆ ಒಮ್ಮೆ ಹೋಗಬೇಕೆನಿಸಿದೆ. ಮತ್ತೆ ಬರುವೆವು ಶಾಲೆಗೆ. ಹೆಮ್ಮೆಯಿಂದ ಹುಣಸೂರು ತಾಲೂಕಿನ ಧರ್ಮಾಪುರದಂತಹ ಸರ್ಕಾರಿ ಪ್ರೌಢಶಾಲೆಗಳು ಜಿಲ್ಲೆಗೆ ನೂರಾಗಲಿ. ಧರ್ಮಕ್ಕೆ ಜಯವಾಗಲಿ.




ಈ ದಿನದ ವಿಶೇಷಗಳ ಸಂಪೂರ್ಣ ವಿಡಿಯೋ ವೀಕ್ಷಿಸಲು ಈ ಯೂಟೂಬ್ ಲಿಂಕ್ ಕ್ಲಿಕ್ಕಿಸಿ https://youtu.be/kAVaro0biCg
 

ಪ್ರಶಾಂತ್.ಎಂ.ಸಿ
ಉಪನ್ಯಾಸಕರು
ಡಯಟ್, ಮೈಸೂರು, 
9019807897, 


6 comments:

  1. ಗ್ರಾಮೀಣ ಪ್ರದೇಶದ ಶಾಲೆಗಳ ಸಾಧನೆಗಳನ್ನು ಗುರುತಿಸುವ ಕೆಲಸ ಗುರುತರವಾದುದು.ಕಾರ್ಯಕ್ರಮದ ಚಿತ್ರಣವನ್ನು ಯಥಾವತ್ತಾಗಿ ಪ್ರಸ್ತುತ ಪಡಿಸಿರುವ ಗುರುಗಳಿಗೆ ಧನ್ಯವಾದಗಳು.

    ReplyDelete
  2. Very well organized and helps to motivate rural students to bring in interest towards Science .. 👍👍

    ReplyDelete
  3. Very nice.ನಿಮ್ಮ ಬರವಣಿಗೆ ಮತ್ತಷ್ಟು ಸ್ಪೂರ್ತಿ ತುಂಬಿದೆ ಸರ್.

    ReplyDelete
  4. ಅತ್ಯುತ್ತಮ ಬ್ಲಾಗ್ ಪ್ರವೀಣ್ ಸರ್ . ತಮ್ಮ ಬ್ಲಾಗ್ ನ ಅಚ್ಚುಕಟ್ಟಾದ ನಿರ್ವಹಣೆ ತುಂಬಾ ಸಂತಸ ನೀಡುತ್ತದೆ. ಅತ್ಯುಪಯುಕ್ತ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು.
    ಹಾಗೆಯೆ ಡಯಟ್ ಉಪನ್ಯಾಸಕರಾದ ಪ್ರೀತಿಯ ಮಾನ್ಯ ಪ್ರಶಾಂತ್ ಸರ್ ಅಭಿಪ್ರಾಯಗಳಲ್ಲಿ ಅವರ ಕನ್ನಡ ಪದ ಜೋಡಣೆ ಅತ್ಯದ್ಭುತ , ಪ್ರಶಾಂತ್ ಸರ್ ತಮಗೂ ಧನ್ಯವಾದಗಳು.

    ReplyDelete